ಥಲಾಮಸ್ (ತೆಲಮಸ್) -
ಮಸ್ತಿಷ್ಕದ ಪೀಠದಂತಿರುವ ಮಿದುಳಿನ ಭಾಗ.  ತಲೆಯರೆ ಪರ್ಯಾಯ ನಾಮ.  ಇದು ಹಿರಿಮಸ್ತಿಷ್ಕದ (ಸೆರಿಬ್ರಮ್) ತಳಭಾಗದಲ್ಲಿ 4 ಸೆಂ.ಮೀ. ಉದ್ದವಾಗಿರುವ ಮೊಟ್ಟೆಯಂತಿದೆ.  ಮುಖ್ಯವಾಗಿ ಬೂದು ವಸ್ತುವಿನಿಂದ (ಗ್ರೇ ಮ್ಯಾಟರ್) ಆಗಿದೆ.  ಬಲಮತ್ತು ಎಡ ಥಲಾಮಸ್‍ಗಳು ಎರಡೂ ಅಕ್ಕಪಕ್ಕದಲ್ಲಿವೆ.  ಆದರೂ ಸ್ವಲ್ಪ ಓರೆಯಾಗಿ ಮಸ್ತಿಷ್ಕಸ್ತಂಭಗಳ (ಸೆರಿಬ್ರಲ್‍ಪಿಡನ್‍ಕಲ್ಸ್) ಶಿರಾಂತ್ಯಗಳ ನಡುವೆ ಅಡ್ಡವಾಗಿ ಇಟ್ಟಂತಿವೆ.  ಇವುಗಳ ನಡುವೆ ಇಕ್ಕಟ್ಟಾದ ಮೂರನೆಯ ಮಿದುಳು ಕುಹರ (ಥರ್ಡ್ ವೆನ್‍ಟ್ರಿಕಲ್) ಇದೆ.  ಎಡ ಮತ್ತು ಬಲ ಥಲಾಮಸ್ಸುಗಳ ಒಳ ಮತ್ತು ಮೇಲು ಭಾಗಗಳು ಒಂದರಿಂದ ಮೂರನೆಯ ಕುಹರಗಳ ಎಲ್ಲೆಯಾಗಿವೆ.  ಕೆಳ ಮತ್ತು ಹೊರಭಾಗಗಳು ಮಿದುಳಿನ ಇತರ ಭಾಗಗಳಲ್ಲಿ ಹೂತುಕೊಂಡಿವೆ.  ಕೆಳಭಾಗಗಳು ಮಧ್ಯಮಸ್ತಿಷ್ಕದ (ಮಿಡ್ ಬ್ರೇಯ್ನ್) ಮೇಲಿವೆ.  ಎರಡೂ ಥಲಾಮಸ್ಸುಗಳ ಮುಂದಿನ ಕೊನೆಗಳು ಸಣ್ಣ.  ಶಿರಮಧ್ಯ ಗೆರೆÀಯ ಆಚೀಚೆ ಒಂದಕ್ಕೊಂದು ಬಹಳ ಹತ್ತಿರ ಇರುವುದೇ ಅಲ್ಲದೆ ಥಲಾಮಸ್ಸಿನ ಮುಂದಿನ ಗಂಟು (ಅ್ಯಂಟೀರಿಯರ್ ಟ್ಯುಬರ್‍ಕಲ್) ಎನ್ನಿಸಿಕೊಂಡು ಅಂತರಕುಹರ ರಂಧ್ರದ (ಇನ್‍ವೆನ್‍ಟ್ರಿಕ್ಯುಲರ್ ಫೊರಾಮೆನ್) ಹಿಂದಿನ ಗಡಿಯಾಗಿದೆ.  ಥಲಾಮಸ್ಸಿನ ಹಿಂದಿನ ಕೊನೆಗಳು ದಪ್ಪವಾಗಿದ್ದು ಅವುಗಳ ನಡುವೆ ಹೆಚ್ಚು ಅಂತರ ಉಂಟು.  ಹಿಂದಿನ ಕೊನೆಗಳ ನಡುವೆ ಚಿಕ್ಕ ಮಗ್ಗಿನಂತಿರುವ ಪೈನಿಯಲ್ ಬಾಡಿ ಎಂಬುದು ಕೆಳಕ್ಕೆ ಜೋತುಬಿದ್ದಿದೆ.  ಗುಂಡಾಗಿ ಉಬ್ಬಿರುವ ಹಿಂದಿನ  ಕೊನೆಯ ಒಳಪಾಶ್ರ್ವ ಪಲ್ವೈನಾರ್ ಎಂಬುದು.  ಇದು ಥಲಾಮಸ್ಸಿನ ಒಳಜಾನುಕಾಯವೆಂಬ (ಮೀಡಿಯಲ್ ಜೆನಿಕ್ಯುಲೇಟ್ ಬಾಡಿ)  ಭಾಗದ ಮೇಲೆ ಅಸೀನವಾಗಿದೆ.ಈ ಎರಡು ಥಲಾಮಸ್‍ಗಳ ಮಧ್ಯಭಾಗಗಳು ಮೂರನೆಯ ಕುಹರದಲ್ಲಿ ಕೂಡಿಕೊಂಡಿವೆ. ಈ ಕೂಡಿಕೆಗೆ ಮಧ್ಯಸೇರುವೆ (ಮಿಡ್ಲ್ ಕಾಮಿಷ್ಯೂರ್) ಎಂದು ಹೆಸರು.

ಥಲಾಮಸ್ಸಿನ ಸುಮಾರು 30 ನರಕಣಗಳ ಗುಂಪುಗಳನ್ನು (ನ್ಯೂಕ್ಲಿಯರ್ - ನರಕಣ ಗುಂಪುಗಳು)  ಮಧ್ಯರೇಖೆಯ (ಮೀಡಿಯನ್).  ಮುಂದಿನ (ಅ್ಯಂಟೀರಿಯರ್).  ಒಳ (ಮೀಡಿಯಲ್), ಹೊರ (ಲ್ಯಾಟರಲ್) ಮತ್ತು ಹಿಂದಿನ (ಪೊಸ್ಟೀರಿಯರ್) ಗುಂಪುಗಳಾಗಿ ಗುರುತಿಸಬಹುದು.  ಇವುಗಳಲ್ಲಿ ಸಂವೇದನೆಗಳನ್ನು ಒಯ್ಯುವ ನರತಂತುಗಳು ಕೊನೆಗೊಂಡು ಬೇರೆ ನರತಂತುಗಳು ಮಸ್ತಿಷ್ಕದ ಬೂದುವಸ್ತುವಿಗೆ ಟಪ್ಪೆಯಾಗುತ್ತವೆ (ರಿಲೇ).  ಈ ಗುಂಪುಗಳಿಂದ ವಿವಿಧ ಸಂವೇದನೆಗಳ ಕಚ್ಚಾ ಅನುಕಲನ (ಕ್ರೂಡ್ ಇನ್‍ಟೆಗ್ರೇಷನ್) ಏರ್ಪಡುವುದೇ  ಅಲ್ಲದೆ ಮಿದುಳಿನ ಎಚ್ಚರ ಸ್ಥಿತಿ (ವೇಕ್‍ಫುಲ್‍ನೆಸ್)  ಫಲಿತವಾಗಿದೆ.  ಇಷ್ಟೇ ಅಲ್ಲದೆ ಒಂದು ಕಡೆ ಕಿರಿಮಸ್ತಿಷ್ಕ (ಸೆರಿಬೆಲ್ಲಮ್)  ಕೆಳತಲೆಯರೆ (ಹೈಪೊಥಲಾಮಸ್) ಹಾಗೂ ತಳನರಕೋಶಗಂಟುಗಳು (ಬೇಸಲ್ ಗ್ಯಾನ್‍ಗ್ಲಿಯ), ಇನ್ನೊಂದು ಕಡೆ ಹಿರಿಮಸ್ತಿಷ್ಕ ಪರಸ್ಪರ ಪ್ರಭಾವಗೊಳ್ಳುವುದು ಸಾಧ್ಯವಾಗಿದೆ.
ಮಧ್ಯರೇಖೆ ಗುಂಪಿನ ಗುಂಬಗಳು :  ಇವು ಮೂರನೆಯ ಕುಹರದ ಭಿತ್ತಿಯಲ್ಲಿದ್ದು ಸಿಲ್ವಿಯಸ್ಸಿನ ಜಲನಾಳದ (ಅಕ್ವಿಡಕ್ಟ್ ಆಫ್ ಸಿಲ್ವಿಯಸ್) ಸುತ್ತಲೂ ಬೂದುವಸ್ತು ಮತ್ತು ಮಧ್ಯಸೇರುವೆಯ ಸುತ್ತ ಇರುವ ಬೂದು ವಸ್ತುವಿನಲ್ಲಿ ಅವಿಚ್ಛಿನ್ನವಾಗಿವೆ.  ಈ ಗುಂಬಗಳು ನÀರಕಣಗಳು ತಳತಲೆಯರೆ ಮತ್ತು ಹಿರಿಮಸ್ತಿಷ್ಕದ ಬೂದುವಸ್ತುಗಳೊಡನೆ ಸಂಪರ್ಕಗೊಂಡಿದ್ದು ಒಳಾಂಗಗಳ (ವಿಸರ) ನಿಯಂತ್ರಣದಲ್ಲಿ ಭಾಗವಹಿಸುತ್ತವೆ.  ಮುಂದಿನ ಗುಂಪಿಗೆ ಸೇರಿದ ಗುಂಬಗಳು ಮೂರು:  ಮೇಲಿನ (ಡಾರ್ಸಲ್) ಕೆಳಗಿನ (ವೆನ್‍ಟ್ರಲ್) ಮತ್ತು ಒಳ (ಮೀಡಿಯಲ್) ಗುಂಬಗಳು.  ಮ್ಯಾಮಿಲ್ಲೊಥಲಮಿಕ್ ನರತಂತು ಮಾರ್ಗಗಳ ಮೂಲಕ ಅವು ಚೂಚುಕಕಾಯ (ಮ್ಯಾಮಿಲ್ಲರಿ ಬಾಡಿ) ಮತ್ತು ಸಿಂಗ್ಯುಲೈಟ್‍ಗೈರಸ್‍ಗಳೊಡನೆ ಸಂಬಂಧಗೊಂಡಿವೆ.  ತತ್ಫಲವಾಗಿ ಇವು ಅಂತರಾಂಗ ಕಾರ್ಯ ನಿಯಂತ್ರಣದಲ್ಲಿ ತೊಡಗಿರುವಂತಿದೆ.  ಒಳಗುಂಪಿಗೆ ಸೇರಿರುವ ಗುಂಬಗಳ ಕಾರ್ಯ ಸರಿಯಾಗಿ ತಿಳಿಯದು.  ಭ್ರೂಭಾಗದಲ್ಲಿ ಹಿರಿಮಸ್ತಿಷ್ಕದ ಬೂದುವಸ್ತುವಿನ (ಫ್ರಾನ್‍ಟಲ್ ಕಾರ್ಟೆಕ್ಸ್) ಒಂಬತ್ತನೆಯ ಪ್ರದೇಶದೊಂದಿಗೆ (ಬ್ರಾಡ್‍ಮನ್ನನ ಒಂಬತ್ತನೆಯ ಏರಿಯ)  ಇವು ಸಂಬಂಧಿಸಲ್ಪಟ್ಟಿದೆ.  ಬಹುಶಃ ಥಲಾಮಸ್ಸಿನ ಅಂತರಿಕ ಸಂಬಂಧಗಳಲ್ಲಿ ಇವುಗಳ ಪಾತ್ರವಿದ್ದಂತೆ ಇದೆ.  ಹೊರಗುಂಪಿನ ಗುಂಬಗಳು ಪಲ್ವೈನಾರಿನ ಮುಂದೆ ದೊಡ್ಡ ಗುಂಪಾಗಿ ಕಂಡುಬರುತ್ತದೆ.  ಮುಂದೆ ಇರುವ ಗುಂಬಕ್ಕೆ ಗ್ಲೋಬಸ್‍ಪ್ಯಾರಿಡಸ್‍ನಿಂದ ನರತಂತುಗಳು ಬಂದು ಸೇರುತ್ತವೆ ಮತ್ತು  ಇದರ ತಂತುಗಳು ಕಾರ್ಪಸ್ ಸ್ಟ್ರೈಟೆಯೇಟಂನನ್ನು ಸೇರುತ್ತದೆ.  ಹೊರ ಕೆಳಗುಂಬಕ್ಕೆ (ಲ್ಯಾಟರಲ್ ವೆನಟ್ರಿಲ್ ನ್ಯೂಕ್ಲಿಯಸ್) ಡೆಂಬಟೇಟೊರೂಬ್ರೋ ತೆಲಮಿಕ್ ಹಾಗೂ ರೆಟಿಕ್ಯೂಲೋತೆಲಮಿಕ್ ತಂತುಗಳು ಬಂದು ಸೇರುತ್ತವೆ.  ಅದರ ಅಪಗಮನ ತಂತುಗಳು (ಇಫರೆಂಟ್ ಫೈಬರ್) ಮಸ್ತಿಷ್ಕದ ಬೂದುವಸ್ತುವಿನ ನಾಲ್ಕನೆಯ ಮತ್ತು ಆರನೆಯ ಪ್ರದೇಶಗಳನ್ನು ತಲುಪತ್ತವೆ.  ಹಿಂದಿನ ಕೆಳಗುಂಬಕ್ಕೆ (ಪೋಸ್ಟಿರೋ ಲ್ಯಾಟರಲ್ ನ್ಯೂಕ್ಲಿಯಸ್) ಇಂದ್ರಿಯತಂತುಗಳು (ಸೆನ್ಸರಿ ಫೈಬರ್) ಸೇರಿ ಅದರ ತಂತುಗಳು ಮಸ್ತಿಷ್ಕದ ಬೂದುವಸ್ತುವಿನ 3,1,2ನೆಯ  ಪ್ರದೇಶಗಳನ್ನು ಸೇರುತ್ತವೆ.  ರೆಟಿಕ್ಯುಲರ್‍ಗುಂಬ ಮಧ್ಯಮಸ್ತಿಷ್ಕದ ಜಾಲವ್ಯವಸ್ಥೆಯೊಂದಿಗೆ (ರೆಟಿಕ್ಯುಲರ್ ಫಾರ್ಮೆಷನ್) ಸಂಬಂಧ ಪಡೆದಿದೆ.

ಹಿಂದಿನಗುಂಪಿನ ಗುಂಬಗಳು :  ಇವುಗಳ ಪೈಕಿ ಪಲ್ವೈನಾರ್ ಗುಂಪು ದೊಡ್ಡದು.   ಇದು  ಮಸ್ತಿಷ್ಕದ  ಬೂದುವಸ್ತುವಿನಲ್ಲಿ ಸಂವೇದನ ಮತ್ತು ಶ್ರವಣ ಹಾಗೂ ದೃಶ್ಯಗಳಿಗೆ ಸಂಬಂಧಪಟ್ಟ ಪ್ರದೇಶಗಳಿಗೆ ತಂತುಗಳನ್ನು ಕಳುಹಿಸಿ ಅವುಗಳಿಂದ ಹಾಗೂ ಇತರ ಥಲಾಮಸ್ ಗುಂಬಗಳಿಂದ ತಂತುಗಳನ್ನು ಪಡೆಯುತ್ತದೆ.  ಇವು ಇಂದ್ರಿಯಗಳ ಸಂಯೋಜಕ ವ್ಯವಸ್ಥೆಯಲ್ಲಿ ಪಾಲುಗೊಳ್ಳುವಂತಿವೆ.  ಥಲಾಮಸ್ಸಿನ ಇತರ ಭಾಗಗಳಾದ ಒಳಜಾನÀುಕಾಯಗಳು ಶ್ರವಣದಲ್ಲೂ ಹೊರಜಾನು ಕಾಯಗಳು (ಲ್ಯಾಟರಲ್ ಜೆನಿಕ್ಯುಲೇಟ್ ಬಾಡಿ) ದೃಷ್ಟಿಕಾರ್ಯದಲ್ಲೂ ಭಾಗವಹಿಸಿತ್ತವೆ.  ಇವನ್ನು  ಒಟ್ಟಾಗಿ ಮೆಟಥಲಾಮಸ್ ಎಂದು ಕರೆದಿದೆ.  ಥಲಾಮಸ್ ಎಂಬುದು ಅಂಚೆಮನೆ ಇದ್ದಂತೆ.  ದೇಹದ ಭಾಗಗಳಿಂದ ಸಮಾಚಾರಗಳನ್ನು (ದೃಷ್ಟಿ ಶ್ರವಣಗಳನ್ನು ಬಿಟ್ಟು) ಬೆನ್ನುಹುರಿ ಮತ್ತು ಮಿದುಳುಕಾಂಡಗಳ ಮೂಲಕ ಪಡೆದು ವರ್ಗೀಕರಿಸಿ ಮಿದುಳಿನ ಬೇರೆ ಬೇರೆ ಭಾಗಗಳಿಗೆ ಕಳುಹಿಸಿ ವಿವಿಧ ಇಂದ್ರಿಯಗಳ ಅಂತಸ್ಸಂಬಂಧವನ್ನು ಕಲ್ಪಿಸುತ್ತದೆ.  ಹೀಗೆ ಅದು  ಇಂದ್ರಿಯಗಳ ಒರಟು ಪ್ರe್ಞÁಕೇಂದ್ರವಾಗಿ ಪರಿಣಮಿಸುತ್ತದೆ.  ಇದರಿಂದಲೇ ಮಹಾಮಸ್ತಿಷ್ಕದ ಇಂದ್ರಿಯಭಾಗ ನಾಶವಾದಾಗಲೂ ರೋಗಿಗೆ ನೋವಾಗುತ್ತಿರುತ್ತದೆ.  ಥಲಾಮಸ್ ಒಳಾಂಗಗಳ ಸಂವೇದನೆಗಳಲ್ಲೂ ಭಾಗವಹಿಸಿ ತಳತಲೆಯರೆಯ  ಮೂಲಕ ಒಳಾಂಗಗಳ ಸ್ವಯಂಚಾಲಿತ ಚಟುವಟಿಕೆಗಳ ನಿಯಂತ್ರಣದಲ್ಲಿ ಬಾಗವಹಿಸುತ್ತದೆ.  ಮಿದುಳಿನ ಭ್ರೂಭಾಗದಲ್ಲಿ ಬೂದುವಸ್ತುವಿನ ಮೂಲಕ ವ್ಯಕ್ತಿತ್ವ ಹಾಗೂ ಸಾಮಾಜಿಕ ವರ್ತನೆಗಳಲ್ಲಿ ಥಲಾಮಸ್ ಭಾಗವಹಿಸುತ್ತದೆ.  ಮಿದುಳಿನ ಉಚ್ಚ ಭಾಗಗಳ ಹತೋಟಿ ತಪ್ಪಿದಾಗ ಥಲಾಮಸ್ ನಿರಂಕುಶವಾಗಿ ವರ್ತಿಸುತ್ತದೆ.  ತತ್ಫಲವಾಗಿ ಥಲಾಮಸ್ ಸಿನ್‍ಡ್ರೋಮ್ ಎಂಬ ಅವ್ಯವಸ್ಥೆ ಕಂಡುಬರುತ್ತದೆ.  ನೋಡಿದ ವಸ್ತುಗಳನ್ನು ಗುರುತಿಸುವ ಸಾಮಥ್ರ್ಯ ನಾಶವಾಗುತ್ತದೆ.  ಸ್ಪರ್ಶ ಹಾಗೂ ಶಾಖದ  ಅರಿವು ಇಲ್ಲವಾಗಿ ರೋಗಿಗಳು ಕುಡಿದು  ಅಮಲು ತಪ್ಪಿದವರಂತೆ ನಡೆದುಕೊಳ್ಳುತ್ತಾರೆ.  ಅವರಿಗೆ ಮೈಯೆಲ್ಲೆಲ್ಲ ಚಳುಕುಗಳು ಹೊಡೆಯುತ್ತಿರುತ್ತವೆ. ಅವಯವಗಳಿವೆಯೋ ಇಲ್ಲವೋ ಎಂಬುದೂ ತಿಳಿಯದಂತಾಗಿ ಅವುಗಳ ಸ್ಥಾನಗಳ ಅರಿವು ಅಳಿಯುತ್ತದೆ.  ಅಂಗಾಂಗಗಳ ಅಪ್ರಯೋಜಕ ಚಲನೆಗಳು ಹತೋಟಿ ತಪ್ಪಿ ನಡೆಯುತ್ತವೆ. ಮಣಿಕಟ್ಟು ಮಡಿಚಿಕೊಂಡು ಕೈಬೆರಳು ಹೆಚ್ಚು ಚಾಚಿಕೊಂಡಿರುತ್ತವೆ.  (ಥಲಾಮಸ್ ಹಸ್ತ).  ಥಲಾಮಸ್ಸಿನ ಅಭಿಗಮನ ಮತ್ತು ಅಪಗಮನ ತಂತುಗಳು ಎಲ್ಲಿಂದ ಪ್ರಾರಂಭವಾಗಿ ಬಂದು ಸೇರುತ್ತವೆ ಮತ್ತು ಎಲ್ಲಿಗೆ ಹೋಗಿ ಅಂತ್ಯಗೊಳ್ಳುತ್ತವೆ ಎನ್ನವುದರ ವಿಶದೀಕರಣದಿಂದ ಮಿದುಳಿನ ಕೆಲವು ನವೀನಶಸ್ತ್ರಕ್ರಿಯೆಗಳ ಸೃಷ್ಟಿ ಅಗಿದೆ.  ತೀವ್ರ ಮಾನಸಿಕ ನಿರುತ್ಸಾಹ, ನಿರಂತರ ಖಿನ್ನತೆಗೆ - ಇವುಗಳಲ್ಲಿ    ಚಿಕಿತ್ಸೆಗಾಗಿ   ಮಸ್ತಿಷ್ಕದ ಭ್ರೂಭಾಗದ ಬೂದುವಸ್ತು ಹಾಗೂ ಥಲಾಮಸ್ - ಇವುಗಳ ನಡುವೆ ಇರುವ ನರತಂತುಗಳ ಛೇದನ ಮಾಡಲಾಗುತ್ತದೆ.  ಇದಕ್ಕೆ ಮಸ್ತಿಷ್ಕದ ಭ್ರೂಭಾಗದ ಶ್ವೇತ ವಸ್ತುಛೇದನ (ಫ್ರಾನ್‍ಟಲ್ ಲ್ಯೂಕಾಟಮಿ) ಎಂದು ಹೆಸರು.
  
ಸ್ತನಿಗಳಿಗಿಂತ ಕೆಳಮಟ್ಟದ ಕಶೇರುಕಗಳ್ಲಿ ಥಲಾಮಸ್ ಎಂಬುದು ಘ್ರಾಣ ಸಾಮಥ್ರ್ಯಕ್ಕೆ ಮಾತ್ರ ಸಂಬಂಧಪಟ್ಟುದು.  ಸ್ತನಿಗಳಲ್ಲಿ ವಿವೇಚನ ಸಾಮಥ್ರ್ಯ ಹೆಚ್ಚಿದಂತೆ ಹಿರಿಮಸ್ತಿಷ್ಕ ವೃದ್ಧಿಗೊಂಡು ಇತರ ಇಂದ್ರಿಯಗಳ ಸಂಬಂಧ ಪಡೆದು ಥಲಾಮಸ್ಸೂ ವೃದ್ಧಿಗೊಳ್ಳುತ್ತದೆ. 
 (ಎಂ.ಡಿ.; ಎನ್.ಟಿ.ಎನ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ